ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ  ಗ್ರಂಥಾಲಯ ವಿಜ್ಞಾನವು ಜ್ಞಾನದ ಭಂಡಾರದ ಉಗ್ರಾಣ. ನಮಗೆ ಅಗತ್ಯವಾದ ಮಾಹಿತಿಗಳನ್ನು ಸಂಗ್ರಹಿಸಲು ನಾವು ಗ್ರಂಥಾಲಯವನ್ನೇ ಅವಲಂಬಿಸಬೇಕಾಗುತ್ತದೆ. ತಂತ್ರಜ್ಞಾನಗಳ ಬೆಳವಣಿಗೆಯಿಂದ ಇವತ್ತು ಗ್ರಂಥಾಲಯಗಳ ಬಳಕೆ, ಉಪಯೋಗ ಜಾಸ್ತಿಯಾಗತೊಡಗಿದೆ. ಮಾತ್ರವಲ್ಲ, ವಿಪುಲವಾದ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತಿದೆ. ಹೀಗಾಗಿ ಗ್ರಂಥಾಲಯ ವಿಜ್ಞಾನವು ಹೊಸ ಕ್ಷೇತ್ರವಾಗಿ ರೂಪುಗೊಂಡಿದೆ. ಇಲ್ಲಿ ಉದ್ಯೋಗದೊಟ್ಟಿಗೆ ನಿರಂತರವಾದ ಅಧ್ಯಯನಕ್ಕೂ ಅವಕಾಶವಿದೆ. ಹಾಗೆಯೇ ಹೊಸ ಹೊಸ ಪುಸ್ತಕಗಳ ಪುಸ್ತಕ ಪಟ್ಟಿಗಳನ್ನು, ವಿವಿಧ ಮಾಹಿತಿಗಳ ಸಂಸ್ಕರಣೆಯನ್ನು, ವಿಂಗಡನೆಯನ್ನು ಹಾಗೂ ಮಾಹಿತಿಗಳ ದಾಖಲೆಯನ್ನು ಸಂಗ್ರಹಿಸುವ ಮಹತ್ತರ ಹೊಣೆಗಾರಿಕೆ ಇರುತ್ತದೆ ಗ್ರಂಥಪಾಲಕರಿಗೆ. ಹೊಸ ಹೊಸ ವಿಷಯಗಳನ್ನು ತಿಳಿಯಲು ಆಸಕ್ತಿ ಇರುವವರಿಗೆ ಹಾಗೂ ಆಳ ಅಧ್ಯಯನ ಆಸಕ್ತರಿಗೆ ಹಾಗೆಯೇ ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಸಕ್ತಿಯಿರುವವರಿಗೆ ಈ ಕ್ಷೇತ್ರ ಸೂಕ್ತವಾದುದು.
ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಕೋರ್ಸ್‌ಗಳಿವೆ (Blisc) ಹಾಗೆಯೇ ಇದರಲ್ಲಿಯೇ ಉನ್ನತ ಶಿಕ್ಷಣ ಮಾಡಬೇಕೆಂದರೆ ಸ್ನಾತಕೋತ್ತರ ಪದವಿ, ಎಂ.ಫಿಲ್ ಹಾಗೂ ಪಿ.ಎಚ್.ಡಿ ಪದವಿ ಪಡೆದು ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಬಹುದು.
ಅರ್ಹತೆಗಳೇನು?
ಮಾಹಿತಿ ತಂತ್ರಜ್ಞಾನ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಸರ್ಟೀಫಿಕೇಟ್ / ಡಿಪ್ಲೊಮಾ ಕೋರ್ಸ್ ಅನ್ನು ಅಧ್ಯಯನ ಮಾಡಬೇಕೆಂದರೆ ಕನಿಷ್ಟ ಪಕ್ಷ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರಬೇಕು. ಹಾಗೆಯೇ ಇದರಲ್ಲಿ ಪದವಿ ಅಧ್ಯಯನ ಮಾಡಬೇಕೆಂದರೆ ಪಿಯುಸಿ/ ಪ್ಲಸ್ ಟು ಉತ್ತೀರ್ಣರಾಗಿರಬೇಕಾಗುತ್ತದೆ. ಭಾರತದಲ್ಲಿರುವ ಹೆಚ್ಚಿನ ವಿ.ವಿ.ಗಳು ಮಾಹಿತಿ ತಂತ್ರಜ್ಞಾನ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಒಂದು ವರ್ಷದ ಪದವಿ ಹಾಗೂ ಎರಡು ವರ್ಷದ ಸ್ನಾತಕೋತ್ತರ ಪದವಿಯನ್ನು ನೀಡುತ್ತಿದೆ. ಪದವಿ ವಿದ್ಯಾಭ್ಯಾಸ ಹಂತದಲ್ಲಿ ಗ್ರಂಥಾಲಯ ವಿಂಗಡನೆ, ಗ್ರಂಥಾಲಯ ಮತ್ತು ವಿಜ್ಞಾನ, ಗ್ರಂಥಾಲಯ ಆಡಳಿತ ಕಾರ್ಯನಿರ್ವಹಣೆ, ಪುಸ್ತಕದ ಪಟ್ಟಿಯ ನಿರ್ವಹಣೆ, ಮಾಹಿತಿಗಳ ಶೋಧನೆ ಬಗ್ಗೆ, ಮಾಹಿತಿಗಳ ಮೂಲಗಳ ಬಗ್ಗೆ, ಮಾಹಿತಿಗಳ ವ್ಯವಸ್ಥೆ ಹಾಗೂ ಉಪಯೋಗಗಳ ಬಗ್ಗೆ, ಮಾಹಿತಿ ತಂತ್ರಜ್ಞಾನದ ಮೂಲಭೂತ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ.
ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದ ನಂತರ ನೇರವಾಗಿ ಎರಡು ವರ್ಷದ ವಿಧಿಬದ್ದ ಸ್ನಾತಕೋತ್ತರ ಪದವಿಗೆ ಅರ್ಹತೆ ಗಳಿಸಬಹುದು. ಪದವಿಯಲ್ಲಿ ಶೇ.೫೦ ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಸ್ನಾತಕೋತ್ತರ ಪದವಿ ಎರಡು ವರ್ಷದ್ದಾಗಿದ್ದು ನಾಲ್ಕು ಸೆಮಿಸ್ಟರ್‌ಗಳನ್ನೊಳಗೊಂಡಿದೆ. ಅಧ್ಯಯನದ ನಂತರ ನಿಮಗೆ ವಿಪುಲವಾದ ಉದ್ಯೋಗಾವಕಾಶಗಳು ತೆರೆದಿರುತ್ತದೆ. ಭಾರತದ ದಕ್ಷಿಣದ ವಿಶ್ವವಿದ್ಯಾಲಯಗಳು ಸಾಮಾನ್ಯವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಎರಡು ವರ್ಷದ ಸ್ನಾತಕ್ತೋರ ಪದವಿಯನ್ನು ನೀಡುತ್ತದೆ. ಕೆಲವು ವಿ.ವಿ.ಗಳು ಇದರಲ್ಲಿ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮವನ್ನು ಇಡುತ್ತದೆ. ಆದರೆ ಈ ವಿಷಯದ ಪದಧರರಿಗೆ ಮಾತ್ರ ಒಂದು ವರ್ಷದ ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೆ ಸೇರಬಹುದು. ಶೇ.೫೦ ಅಂಕಗಳಿದ್ದರೆ. ದೇಶದ ಹೆಚ್ಚಿನ ವಿ.ವಿ.ಗಳು ಮಾಹಿತಿ ತಂತ್ರಜ್ಞಾನ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಬಿ.ಎಲ್.ಐ.ಎಸ್‌ಸಿ, ಎರಡು ವರ್ಷದ ಎಮ್.ಎಲ್.ಐ‌ಎಸ್‌ಸಿ ಸ್ನಾತಕೋತ್ತರ ,ಎಂ.ಫಿಲ್ ಮತ್ತು ಪಿ.ಎಚ್.ಡಿ .ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತದೆ.
 ಕೆಲವು ವಿಶ್ವವಿದ್ಯಾಲಯಗಳೆಂದೆರೆ....
-ಮದ್ರಾಸ್ ವಿಶ್ವವಿದ್ಯಾನಿಲಯ ಚೆನ್ನೆ-೬೦೦೦೦೫
- ಬೆಂಗಳೂರು ವಿಶ್ವವಿದ್ಯಾನಿಲಯ - ೫೬೦೦೫೬
- ಮಂಗಳೂರು ವಿಶ್ವವಿದ್ಯಾನಿಲಯ,ಕೊಣಾಜೆ, ಮಂಗಳೂರು-೫೭೪೧೯೯
- ಅಣ್ಣಾಮಲೈ ವಿಶ್ವವಿದ್ಯಾನಿಲಯ ಅನ್ನಾಮಲೈ ನಗರ್ - ೬೦೮೦೦೨
- ಆಂಧ್ರ ವಿಶ್ವವಿದ್ಯಾನಿಲಯ, ವಿಶಾಖಪಟ್ಟಣಂ - ೫೩೦೦೦೩
- ಮುಂಬೈ ವಿಶ್ವವಿದ್ಯಾನಿಲಯ, ಮುಂಬೈ- ೪೦೦೦೯೮
- ಬಾನಾರಸ್ ಹಿಂದೂ ವಿಶ್ವವಿದ್ಯಾನಿಲಯ, ವಾರಣಾಸಿ- ೨೨೧೦೦೫
- ಜಿವಾಜಿ ವಿಶ್ವವಿದ್ಯಾನಿಲಯು, ಗ್ವಾಲಿಯರ್
- ಬುಂದ್ಲೆಕಾಂಡ್ ವಿಶ್ವವಿದ್ಯಾನಿಲಯ ಝಾನ್ಸಿ - ೨೮೪೧೨೮
- ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯ, ಅಲಿಗಢ- ೨೦೨೦೦೨.
ಸಾಕ್ಷಚಿತ್ರ, ಸಂಶೋಧನೆ ಮತ್ತು ತರಬೇತಿ ಸೆಂಟರ್ ಬೆಂಗಳೂರು ಹಾಗೂ ಇಂಡಿಯನ್ ನ್ಯಾಷನಲ್ ಸೈಂಟಿಫಿಕ್ ಡಾಕ್ಯುಮೆಂಟೇಷನ್ ಸೆಂಟರ್ ಹೊಸದಿಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಾಕ್ಷಚಿತ್ರ ವಿಭಾಗಕ್ಕೆ ಅನುಭವವುಳ್ಳ ಪದವಿ ಹೊಂದಿದ ಗ್ರಂಥಾಪಾಲಕರಿಗೆ ಅವಕಾಶವಿದೆ. ಇಲ್ಲಿ ಕಾರ್ಯನಿರ್ವಹಿಸಿದರೆ ಸ್ನಾತಕೋತ್ತರ ಎಮ್.ಎಲ್.ಐ.ಸಿ. ಪದವಿಗೆ ಸಮಾನಾಗಿದೆ. ಕೇರಳ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಇದರಲ್ಲಿ ಎರಡು ವರ್ಷದ ನಾಲ್ಕು ಸೆಮಿಸ್ಟರ್‌ನ ಸ್ನಾತಕೋತ್ತರ ಪದವಿ ಕೋರ್ಸ್ ಇದೆ.ಈ ಕೋರ್ಸ್‌ನಲ್ಲಿ ಮಾಹಿತಿ ಜ್ಞಾನ ಮತ್ತು ಸಂವಹನ, ಗ್ರಂಥಾಲಯ ಮತ್ತು ಸಮಾಜ, ಗ್ರಂಥಾಲಯ ಮೇಲ್ವಿಚಾರಣೆ, ಮಾಹಿತಿ ಮೂಲಗಳ, ಮಾಹಿತಿ ಸಂಸ್ಥೆಗಳ, ಮಾಹಿತಿ ತಂತ್ರಜ್ಞಾನ, ಮಾಹಿತಿಗಳ ಸಂಸ್ಕರಣೆ ಮಾಡುವುದು, ಮಾಹಿತಿ ವ್ಯವಸ್ಥೆ, ಸಂಶೋಧನೆ ವಿಧಾನಗಳ ಬಗ್ಗೆ, ಗ್ರಂಥಸಂಗ್ರಹಗಳ ಬಗ್ಗೆ, ಗ್ರಂಥಾಲಯ ಮತ್ತು ಮಾಹಿತಿ ವ್ಯವಸ್ಥೆಗಳ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಈ ವಿಷಯಗಳಲ್ಲಿ ಪಠ್ಯಕ್ರಮವಿದೆ. ಮಾತ್ರವಲ್ಲ, ಡೆಸರ್‌ಟೇಷನ್,ವೈವಾ ವಾಯ್ಸ್ ಇವುಗಳು ಸಹ ಈ ಕೋರ್ಸ್‌ನಲ್ಲಿ ಸೇರುತ್ತದೆ.
ಹಾಗೆಯೇ ಈ ವಿಭಾಗದಲ್ಲಿ ಒಂದು ವರ್ಷದ ಎಮ್.ಎಲ್.ಐ.ಸಿ.ಸ್ನಾತಕೋತ್ತರ ಪದವಿಯನ್ನು ,ಉದ್ಯೋಗ ಮಾಡುತ್ತಾ ಸಂಜೆ ಹೊತ್ತಿನಲ್ಲಿ ಕಲಿಯುವ ಅವಕಾಶವಿದೆ. ಇದಕ್ಕಾಗಿ ನೀವು ಬಿ.ಎಲ್.ಐ.ಸಿ ಪದವಿಯಲ್ಲಿ ಶೇ.೫೦ ರಷ್ಟು ಅಂಕಗಳನ್ನು ಪಡೆದಿರಬೇಕು. ನೀವು ಇಲ್ಲಿ ಈ ಒಂದು ವರ್ಷದ ಸ್ನಾತಕೋತ್ತರ ಪದವಿಗೆ ಸೇರಬಯಸುವುದಾದರೆ ಕೆಲವು ವಿಷಯವಾರು ಆಯ್ಕೆಗಳಿವೆ. ಅವುಗಳೆಂದರೆ, ವಿಜ್ಞಾನ ಮಾಹಿತಿಗಳ ವಿಧಾನ, ಕೃಷಿ ಮಾಹಿತಿ ವಿಧಾನ, ಸಮಾಜ ವಿಜ್ಞಾನ ಮಾಹಿತಿ ವಿಧಾನ, ಆರೋಗ್ಯ ಮಾಹಿತಿಗಳ ವಿಧಾನ, ಕೈಗಾರಿಕಾ ಮಾಹಿತಿಗಳ ವಿಧಾನ, ವ್ಯವಸ್ಥಿತ ಗ್ರಂಥಾಲಯಗಳ ವಿಧಾನ ಮತ್ತು ಸಾರ್ವಜನಿಕ ಗ್ರಂಥಾಲಯ ವಿಧಾನ ಈ ವಿಷಯಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಈ ವಿಭಾಗದ ಮೂಲಕ ಇದೇ ವಿಷಯದಲ್ಲಿ ಒಂದು ವರ್ಷದ ಎಂ.ಫಿಲ್ ಪದವಿಯನ್ನು ಅಧ್ಯಯನ ಮಾಡಬಹುದು.
ಕೊಟ್ಟಾಯಂನ ಸ್ಕೂಲ್ ಆಫ್ ಕಮ್ಯುನೀಕೇಶನ್ ಆಂಡ್ ಇನ್‌ಫಾರ್‌ಮೇಷನ್ ಸಾಯನ್ಸ್(ಎಂಜಿ ವಿ.ವಿ.) ಕಾಲೇಜ್‌ನಲ್ಲಿ ಬಿ.ಎಲ್.ಐ.ಸಿ ಮತ್ತು ಎಮ್.ಎಲ್.ಐ.ಸಿ ಕೋರ್ಸ್‌ಗಳಿವೆ. ಮಾತ್ರವಲ್ಲ ಇಲ್ಲಿ ಉದ್ಯೋಗ ಮಾಡುತ್ತಾ ಒಂದು ವರ್ಷದ ಎಮ್.ಎಲ್.ಐ.ಸಿ ಸ್ನಾತಕೋತ್ತರ ಪದವಿಯನ್ನು ಸಹ ಕಲಿಯಲು ಅವಕಾಶವಿದೆ. ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಮೂಲಕ ಎರಡು ವರ್ಷದ ಎಮ್.ಎಲ್.ಐ.ಸಿ ಸ್ನಾತಕೋತ್ತರ ಪದವಿಯನ್ನು ಕಲಿಯುವ ಅವಕಾಶ ಸಹ ಇದೆ.
ದೂರಶಿಕ್ಷಣದ ಮೂಲಕ...
ಕೆಲವು ವಿಶ್ವವಿದ್ಯಾನಿಲಯಗಳು ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ದಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ನೀಡುತ್ತಿದೆ. ಇಗ್ನೋ ಇದಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಸ್‌ಗಳನ್ನು ಆಳವಡಿಸಿಕೊಂಡಿದೆ. ಜೊತೆಗೆ ಮದ್ರಾಸ್ ದೂರಶಿಕ್ಷಣ ವಿವಿಯಲ್ಲಿ, ಮಧುರೈ ಕಾಮರಾಜ್ ವಿಶ್ವವಿದ್ಯಾನಿಲಯದಲ್ಲಿ ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ದಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕಲಿಯಲು ಅವಕಾಶವಿದೆ. ಹಾಗೆಯೇ ಕೇರಳ ದೂರಶಿಕ್ಷಣ ವಿಶ್ವವಿದ್ಯಾನಿಲಯ, ಕರಿಯಾವಟ್ಟಂ, ತಿರುವನಂತಪುರ ವಿಶ್ವವಿದ್ಯಾನಿಲಯಗಳಲ್ಲಿ ಸಹ ಬಿ.ಎಲ್.ಐ.ಸಿ ಪದವಿಯನ್ನು ದೂರಶಿಕ್ಷಣದ ಮೂಲಕ ಕಲಿಯಬಹುದು. ಯುಜಿಸಿಯ ಅನುಮೋದನೆ ದೊರೆತಿರುವ ಈ ವಿ.ವಿ.ಗಳಲ್ಲಿ ಕಲಿತ ವಿದ್ಯಾರ್ಥಿಗಳು ಸರಕಾರಿ ಉದ್ಯೋಗಕ್ಕೆ ಸಹ ಅರ್ಜಿಗಳನ್ನು ಹಾಕಬಹುದು. ಹಾಗೆಯೇ ಈ ವಿ.ವಿ.ಯಲ್ಲಿ ಗ್ರಂಥಾಲಯ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣಗಳ ಬಗ್ಗೆ ಅವಕಾಶಗಳ, ಪೂರ್ಣಕಾಲಿಕ ಹಾಗೂ ದೂರಶಿಕ್ಷಣ ಶಿಕ್ಷಣ ನೀಡುವ ಸಂಸ್ಥೆಗಳ ಬಗೆಗಿನ ಮಾಹಿತಿಗಳನ್ನು ಪಡೆಯಬಹುದು.
contact-
www.unom.ac.in, www.mkudde.org, www.ignou.ac.in
ಉದ್ಯೋಗವಾಕಾಶಗಳು....
ನೀವು ಬಿ.ಎಲ್.ಐ.ಸಿ, ಎಮ್.ಎಲ್.ಐ.ಸಿ, ಕೋರ್ಸ್‌ಗಳನ್ನು ಉತ್ತೀರ್ಣ ಮಾಡಿದ ನಂತರ ದ್ವೀತಿಯ ಹಾಗೂ ತೃತೀಯ ದರ್ಜೆಯ ಗ್ರಂಥಪಾಲಕನಾಗಿ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗ ಆರಂಭಿಸಬಹುದು. ಸ್ನಾತಕೋತ್ತರ ಪದವಿ/ ಪಿ.ಎಚ್.ಡಿ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಶಿಫ್ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ (ಜಿ‌ಆರ್‌ಎಫ್ ಎನ್‌ಇಟಿ)ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕನಾಗಬಹುದು. ಸ್ನಾತಕೋತ್ತರ ಪದವಿ, ಯುಜಿಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಯಾವುದೇ ಕಾಲೇಜಿನಲ್ಲಿ ಪ್ರಥಮ ಗ್ರೇಡ್ ಗ್ರಂಥಪಾಲಕ / ಸಹಾಯಕ ಗ್ರಂಥಪಾಲಕನಾಗಬಹುದು. ವಿಜ್ಞಾನ ಸಂಸ್ಥೆಗಳಲ್ಲಿ ಸಹ ಸ್ನಾತಕೋತ್ತರ ಪದವಿಯಾಗಿದ್ದರೆ ಸಹಾಯಕನಾಗಿ ಕಾರ್ಯ ನಿರ್ವಹಿಸಬಹುದು. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿಗೆ ಬರವಿಲ್ಲ. ವಿವಿಧ ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳ ವಿಭಾಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಅವಕಾಶಗಳಿವೆ.